ಕಾಮತ್, ಎಂ ವಿ

   (1921) ಮಾಧವ ವಿಠಲ ಕಾಮತ್ ಕರಾವಳಿಯ ಪುಟ್ಟ ಊರಿನಲ್ಲಿ ಹುಟ್ಟಿ ಮುಂಬೈ ಸೇರಿ, ನಂತರ ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರೆಂದು ಹೆಸರು ಮಾಡಿರುವ ಕನ್ನಡನಾಡಿನ ಸುಪುತ್ರ. ಸುಮಾರು 45 ಪುಸ್ತಕಗಳ ಕರ್ತೃ. ಬಹಳಷ್ಟು ಪುಸ್ತಕಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ್ದು. ಮುಂಬೈ, ದೆಹಲಿ, ಪ್ಯಾರಿಸ್, ಜಿನೀವಾ, ವಿಶ್ವಸಂಸ್ಥೆ, ನ್ಯೂಯಾರ್ಕ್, ವಾಷಿಂಗ್ಟನ್‍ಗಳಲ್ಲಿ ವಿಶೇಷವರದಿಗಾರರಾಗಿ ಸೇವೆಸಲ್ಲಿಸಿರುವ ಎಂ.ವಿ. ಕಾಮತ್, ಈಗ ಪ್ರಸಾರ ಭಾರತಿ ಅಧ್ಯಕ್ಷರು. ಜತೆಜತೆಯಲ್ಲೇ ಪತ್ರಿಕಾ ಅಂಕಣಕಾರರಾಗಿ ದೇಶದೆಲ್ಲೆಡೆ ಪ್ರಸಿದ್ಧಿ.

 1921ರಲ್ಲಿ ಉಡುಪಿಯಲ್ಲಿ ಜನನ. 1941ರಲ್ಲಿ ಬಿ.ಎಸ್.ಸಿ ಪದವಿ ಪಡೆದು ಐದು ವರ್ಷ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ದುಡಿಮೆ. 1946ರಲ್ಲಿ ಮುಂಬೈಗೆ ವಲಸೆ. ಆಗೆಲ್ಲ ಕಾಮತರ ಹೃದಯಕ್ಕೆ ತಾಗಿದ್ದು ಪತ್ರಿಕಾವೃತ್ತಿ ಖಯಾಲಿ. ಆಗ ಎಂ.ವಿ.ಕಾಮತರಿಗೆ 25 ವರ್ಷ. ಭಾರತೀಯ ಪತ್ರಿಕೋದ್ಯಮದ ಧೀಮಂತ ಸದಾನಂದರ ಪತ್ರಿಕಾಲಯಕ್ಕೆ ಎಡತಾಕಿದ್ದು ಹಲವು ಬಾರಿ. ಕೆಮಿಸ್ಟ್‍ಗೆ ಯಾವ ಕೆಲಸ? ಸಾಧ್ಯವಿಲ್ಲ ಎಂಬ ಖಂಡತುಂಡ ಉತ್ತರ ಸದಾನಂದರಿಂದ. ಆದರೆ ಕರಾವಳಿಯ ಯುವಕ ಪಟ್ಟು ಬಿಡಲಿಲ್ಲ. ಸದಾನಂದರು ಮನಸ್ಸು ಬದಲಾಯಿಸಬೇಕಾಯಿತು. ಯುವಕನಿಗೆ ತಮ್ಮ ಗರಡಿಯಲ್ಲಿ ಪತ್ರಕರ್ತನ ದೀಕ್ಷೆ ನೀಡಿದರು. 'ಫ್ರೀಪ್ರೆಸ್‍ಜರ್ನಲ್' ಸೇರಿ, 1946ರಿಂದ 1954ರವರೆಗೆ ಅದರ ಪತ್ರಕರ್ತರಾಗಿ, ವಿಶೇಷ ಸಲಹೆಗಾರರಾಗಿ ಕೊನೆಗೆ ಅದರ ಸಂಪಾದಕರಾಗಿ ಕೆಲಸ ಮಾಡಿರುವುದು ಎಂ.ವಿ.ಕಾಮತ್. ಅವರ ಮೊದಲ ಸಾಹಸ. ಆ ಕಾಲದಲ್ಲಿ ಅವರು ಶೇಖ್ ಅಬ್ದುಲ್ಲ ಬಂಧನದ ಸುದ್ದಿ ಶ್ರೀನಗರದಿಂದ ಮಾಡಿದ ವರದಿ ಸಾಹಸಮಯ. ಭಾರತೀಯ ಪತ್ರಿಕಾರಂಗದ ಸರ್ವಶ್ರೇಷ್ಠ ವರದಿ ಎಂಬ ಹೆಗ್ಗಳಿಕೆಗೆ ಪಾತ್ರ. ನಾಥೂರಾಂ ಗೋಡ್ಸೆ ಸಂಪೂರ್ಣ ವಿಚಾರಣೆಯನ್ನು ಚಾಚೂ ತಪ್ಪದೆ ಮಾಡಿದ ವರದಿ ಗೋಡ್ಸೆಯನ್ನೂ ಬೆರಗುಗೊಳಿಸಿತ್ತಂತೆ.

 1955ರಿಂದ 1958ರ ಅವಧಿಯಲ್ಲಿ ಎಂ.ವಿ.ಕಾಮತ್ ವಿಶ್ವಸಂಸ್ಥೆಯಲ್ಲಿ ಭಾರತೀಯ ನಿಯೋಗದ ಸದಸ್ಯರಾಗಿ ವರದಿ ಮಾಡುವ ಕಾಲದಲ್ಲಿ ಅಂದಿನ ರಕ್ಷಣಾ ಸಚಿವ ಕೃಷ್ಣಮೆನನ್ ಅವಕೃಪೆಗೆ ಪಾತ್ರರಾಗುತ್ತಾರೆ. ಒರಟು ಸ್ವಭಾವದ ಮೆನನ್‍ಗೆ ನೇರನುಡಿಯ ಕಾಮತರ ನಡೆ ಹಿಡಿಸಲಿಲ್ಲ. ಪರಿಣಾಮ ಕೆಲಸವಿಲ್ಲದೆ ಮುಂಬೈಗೆ ವಾಪಸ್. ಆಗಿನ ಕಹಿಜೀವನ ಅನುಭವ, ಕೆಲಸವಿಲ್ಲದೆ ಮೊಟ್ಟ ಮೊದಲಿಗೆ ಕಷ್ಟಪಡುವ ಪಾಡು. ಸ್ಥಿತಪ್ರಜ್ಞ ಕಾಮತರು ಅಂಜದೆ, ದಿನದ ಖರ್ಚಿಗಾಗಿ ಲೇಖನ ಬರೆಯುವ ಕೆಲಸ ಮಾಡಿದರು. ಕೊನೆಗೂ ಅದೃಷ್ಟ ಕೈಬೀಸಿ ಕರೆಯಿತು. ಮುಂದಿನ ಏಳುವರ್ಷಕಾಲ ಟೈಮ್ಸ್ ಆಫ್ ಇಂಡಿಯಾದ ವಿಶೇಷ ಪ್ರತಿನಿಧಿಯಾಗಿ ಜವರ್iನಿ ಹಾಗೂ ಫ್ರಾನ್ಸ್‍ಗಳಲ್ಲಿ ನಿಯೋಜಿತರಾದರು. 

 ಆ ಕಾಲದಲ್ಲಿ ಕಾಮತರ ಪರಿಚಯವಿಲ್ಲದ ಯೂರೋಪಿನ ನಾಯಕರೇ ಇರಲಿಲ್ಲ. ಯೂರೋಪಿನಲ್ಲಿ ಹಲವು ದೇಶಗಳ ಪತ್ರಕರ್ತರೊಡನೆ ಅವರ ಸಹಜೀವನ ಎಂ.ವಿ.ಕೆ. ವೃತ್ತಿ ಜೀವನದ ಅಮೂಲ್ಯ ಅನುಭವ. ಮುಂಬೈಗೆ ವಾಪಸಾಗಿ 1967ರಿಂದ 69ರವರೆಗೆ ಟೈಮ್ಸ್ ಆಫ್ ಇಂಡಿಯಾದ ಸಂಪಾದಕರಾಗಿ ಸೇವೆ. ಪುನ: ಅದೇ ಪತ್ರಿಕೆಯ ವಾಷಿಂಗ್ಟನ್ ವಿಶೇಷವರದಿಗಾರರಾಗಿ ಸುಮಾರು ಒಂದು ದಶಕದವರೆಗೆ ಅವರ ದುಡಿಮೆ; ಮಾಧವ ವಿಠಲ ಕಾಮತರ ಪತ್ರಿಕಾ ಬದುಕಿನ ಸ್ವರ್ಣಯುಗ. ಅಮೆರಿಕೆಯ ರಾಜಧಾನಿಯಲ್ಲಿ ಅವರ ಮಿತ್ರರ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷರು ಇದ್ದುದ್ದರಲ್ಲಿ ವಿಶೇಷವೇನಿಲ್ಲ. ಕಾಮತರ ನಗುಮುಖ, ಕಾರ್ಯವೈಖರಿ, ಮೇಧಾವಿತನ ಮೆಚ್ಚದೆ ಇರಲು ಸಾಧ್ಯವೇ ಇರಲಿಲ್ಲ. ವಾಷಿಂಗ್ಟನ್ ಪತ್ರಿಕಾ ಬಳಗದಲ್ಲಂತೂ ಅವರು ಎಲ್ಲರಿಗೂ ಬೇಕಾದ `ಮಾಧವ್' ಆಗಿದ್ದರು. 

 1978ರಲ್ಲಿ ಮುಂಬೈಗೆ ಬಂದರು. 81ರವರೆಗೆ ಪ್ರತಿಷ್ಠಿತ `ಇಲಸ್ಟ್ರೇಟೆಡ್‍ವೇಕ್ಲಿ'ಯ ಸಂಪಾದಕರಾಗಿ ಪತ್ರಿಕೆಯ ಕೀರ್ತಿ ಮುಗಿಲು ಮುಟ್ಟಿಸಿದರು. ಪತ್ರಿಕೆ-ಕಾಮತ್-ಎರಡರ ನಡುವೆ ಅವಿನಾಭಾವ ಸಂಬಂಧ. ಪತ್ರಿಕೆಯ ಹೆಸರಿನಿಂದಲೇ ನಾಡಿನೆಲ್ಲೆಡೆ ಚಿರಪರಿಚಿತರಾದರು. 1981ರಲ್ಲಿ ವೇತನ ಸಹಿತ ವೃತ್ತಿಗೆ ವಿದಾಯ. ಆದರೆ ಅಂಕಣಕಾರರಾಗಿ ಇಂದಿಗೂ ಸಕ್ರಿಯ. ಉದಯವಾಣಿ ಪತ್ರಿಕೆಯಲ್ಲಿ ಇಂದಿಗೂ ಪ್ರತಿವಾರವೂ ಅಂಕಣ ಬರೆಯುತ್ತಾರೆ. ಉಡುಪಿಯ ಮಂದಿಗೆ ಈಗಲೂ ಮಾಧವಮಾಮರೆಂದೇ ಚಿರಪರಿಚಿತರು. ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರು. ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಗೌರವ ಅಧೀಕ್ಷಕರು. ಟಿ.ಎಂ.ಎ. ಪೈ ಪ್ರತಿಷ್ಠಾನದ ಮುಖ್ಯ ಬೆನ್ನೆಲುಬಾಗಿದ್ದಾರೆ.

 ಈಗಲೂ ಪುಸ್ತಕ ಬರೆಯುವ ಪ್ರವೃತಿ ನಿಂತಿಲ್ಲ. ಈಗ ಅವರ ಆತ್ಮಕತೆ ಹೊರಬಂದಿದೆ ಎ ರಿಪೊರ್ಟರ್ ಅಟ್ ಲಾರ್ಜ್, ಇಂಡಿಯನ್ ನೇಮ್ಸ್, ದ ಇನವೇಟಿವ್ ಬ್ಯಾಂಕರ್, ಟೈಡ್ಸ್ ಆಫ್ ಟೈಂ; ದ ಜರ್ನಲಿಸ್ಟ್ ಹ್ಯಾಂಡ್ ಬುಕ್. ಎಂ.ವಿ.ಕಾಮತರ ಅನುಭವ ಜನ್ಯ ಕೃತಿಗಳು. ಪತ್ರಿಕೋದ್ಯಮ ವಿದ್ಯಾರ್ಥಿUಳಿಗೆ ವೃತ್ತಿಪಾಠ ಅವರ ಈಗಿನ ಇನ್ನೊಂದು ಮುಖ. ಕರ್ನಾಟಕ ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ಸೇರಿದಂತೆ, ಅನೇಕ ಪ್ರಶಸ್ತಿ ಪಾತ್ರರು.

          (ಕೆ.ಎಸ್.ಅಚ್ಯುತನ್) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ